ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)ಯಡಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಅನುಷ್ಠಾನಗೊಳಿಸಲು ಅನುಮೋದನೆಯಾಗಿರುವ 1,08,253 ಮನೆಗಳ ಪೈಕಿ ಪ್ರಾರಂಭಿಸದೆ ಸ್ಥಗಿತಗೊಳಿಸಲಾಗಿದ್ದ 61,894 ಮನೆಗಳನ್ನು ಪುನರ್ ಪ್ರಾರಂಭಿಸಲು ಮತ್ತು ಇದಕ್ಕೆ ಅಗತ್ಯವಿರುವ 2,643.67 ಕೋಟಿ ರೂ.ಗಳನ್ನು ಭರಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 61,894 ಮನೆಗಳನ್ನು ಮೂಲಭೂತ ಸೌಕರ್ಯ ಒಳಗೊಂಡಂತೆ ಪುನರ್ ಪ್ರಾರಂಭಿಸಲು 2023ರ ಡಿ.21ರಂದು ಜರುಗಿದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಹೇಳಿದರು.
ಫಲಾನುಭವಿಗಳ ಪಾಲಿನ ವಂತಿಗೆಯ ಪೈಕಿ ಒಂದು ಲಕ್ಷ ರೂ.ಗಳನ್ನು ಮಾತ್ರ ಸಂಗ್ರಹಿಸಿಕೊಂಡು, ಉಳಿದ ಫಲಾನುಭವಿ ವಂತಿಗೆಯನ್ನು ಸರಕಾರದಿಂದ ಭರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅದರನ್ವಯ ಸ್ಥಗಿತಗೊಳಿಸಿರುವ 61,894 ಮನೆಗಳನ್ನು ಪುನರ್ ಪ್ರಾರಂಭಿಸಲು ಅಗತ್ಯವಿರುವ 2475.76 ಕೋಟಿ ರೂ.ಗಳು ಹಾಗೂ ಮೂಲ ಸೌಕರ್ಯ ಒದಗಿಸಲು ಅಗತ್ಯವಿರುವ 168 ಕೋಟಿ ರೂ.ಗಳು ಸೇರಿ ಒಟ್ಟು 2643.76 ಕೋಟಿ ರೂ.ಗಳನ್ನು ಭರಿಸಲು ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
0 Comments