ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನೌಕರರ ಹಲವಾರು ವರ್ಷಗಳ ಕನಸು ಇಂದು ಅಧಿಕೃತವಾಗಿ ನನಸಾಗಿದ್ದು, ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ (ಆರೋಗ್ಯ ಕಾರ್ಡ್)ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಇಂದು ಬೆಳಗ್ಗೆ ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಯೋಜನೆಯ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತರಿದ್ದರು. ಸರ್ಕಾರಿ ಒಡೆತನದ ಸಾರಿಗೆ ಸಂಸ್ಥೆಗಳ ಪೈಕಿ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಮಾಡಿರುವುದು ದೇಶದಲ್ಲೇ ಮೊದಲನೆಯ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕರ್ನಾಟಕ ಈ ಮೂಲಕ ಪಾತ್ರವಾಗಿದೆ.
ನೌಕರರಿಗೆ ಆರೋಗ್ಯ ಕಾರ್ಡ್: ಕರ್ನಾಟಕ ಸರ್ಕಾರ ರಾಜ್ಯದ ಖಾಸಗಿ ಮತ್ತು ಆಯುರ್ವೇದಿಕ್ ಸೇರಿದಂತೆ 250ಕ್ಕೂ ಹೆಚ್ಚು ಆಸ್ಪತ್ರೆಗಳೊಂದಿಗೆ ಒಡಬಂಡಿಕೆ ಮಾಡಿಕೊಂಡಿದೆ. ಈ ಒಡಂಬಡಿಕೆಯಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು/ ನೌಕರರು ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಸಂಸ್ಥೆ ಕೊಟ್ಟಿರುವ ಆರೋಗ್ಯ ಕಾರ್ಡ್ ತೋರಿಸುವ ಮೂಲಕ ಚಿಕಿತ್ಸೆ ಪಡೆಯಬಹುದಾಗಿದೆ.
ಸೂಪರ್ ಸ್ಪೆಷಾಲಿಟಿ, ಮಲ್ಟಿ ಸ್ಪೆಷಾಲಿಟಿ ಸೇರಿದಂತೆ ಸಾಮಾನ್ಯ ಆಸ್ಪತ್ರೆಯಲ್ಲೂ ಕೆಎಸ್‌ಆರ್‌ಟಿಸಿ ನೌಕರರು ಮತ್ತು ಅವರ ಕುಟುಂಬದವರಿಗೆ ನಗದು ರಹಿತ ಚಿಕಿತ್ಸೆ ದೊರೆಯಲಿದೆ. ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಆರೋಗ್ಯ ಕಾರ್ಡ್ ಮೂಲಕ ಸಿಬ್ಬಂದಿಯ ಕುಟುಂಬದ ಸದಸ್ಯರು (ಪತಿ, ಪತ್ನಿ, ಮಕ್ಕಳು, ತಂದೆ, ತಾಯಿ) ಈ ಸೌಲಭ್ಯವನ್ನು ಪಡೆಯಬಹುದು. ಒಟ್ಟಾರೆಯಾಗಿ, ಕುಟುಂಬದ ಸದಸ್ಯರಿಗೆ ನಗದು ರಹಿತ ಆರೋಗ್ಯ ಸೇವೆ ಲಭ್ಯವಾಗಲಿದೆ. ನೌಕರರು ನಿವೃತ್ತಿಯಾಗುವವರೆಗೂ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಈ ಸೌಲಭ್ಯ ಪಡೆಯಲು ಕೆಎಸ್‌ಆರ್ಟಿಸಿ ನೌಕರರು ಪ್ರತಿ ತಿಂಗಳು 650 ರೂಪಾಯಿ ಪಾವತಿ ಮಾಡಬೇಕು. ಕೆಎಸ್‌ಆರ್‌ಟಿಸಿ ನಿಗಮ 600 ರೂಪಾಯಿ ಪಾವತಿ ಮಾಡುತ್ತದೆ. ಇದರಿಂದ ವರ್ಷಕ್ಕೆ ಒಟ್ಟು 46 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ನುಕುಮಾರ್ ಹೇಳಿದರು.
ಇಂದು ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ದೊರೆಯುತ್ತಿದ್ದು, ಮುಂದಿನ ಮಾರ್ಚ್ ವೇಳೆಗೆ ಉಳಿದ ಬಿಎಂಟಿಸಿ, ಕೆಕೆಆರ್‌ಟಿಸಿ ಹಾಗೂ ಎನ್‌ಡಬ್ಲ್ಯುಕೆಆರ್‌ಟಿಸಿ ನಿಗಮಗಳ ಅಧಿಕಾರಿಗಳು/ನೌಕರರಿಗೂ ಈ ಸೌಲಭ್ಯ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಇನ್ನು ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಪಡೆಯುವುದಕ್ಕೆ ಮೊದಲು ಉಳಿದ ಮೂರು ನಿಗಮಗಳು ಎಚ್‌ಆರ್‌ಎಂಎಸ್‌ಗೆ ಒಳಪಡಬೇಕು, ಆ ಬಳಿಕ ನೌಕರರಿಗೆ ಈ ಸೌಲಭ್ಯ ನೀಡಲು ಸಾಧ್ಯವಾಗಲಿದೆ. ಹೀಗಾಗಿ ನಾವು ಈಗಾಗಲೇ ಈ ಮೂರು ನಿಗಮಗಳ ನೌಕರರನ್ನು HRMSಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಫಾರಂಗಳನ್ನು ವಿತರಿಸಿದ್ದೇವೆ ಎಂದು ಮಾಹಿತಿ ನೀಡಿದರು.
0 Comments