ಕೇಂದ್ರವು ಶುಕ್ರವಾರ ಬಿಡುಗಡೆಗೊಳಿಸಿರುವ ಕರಡು ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ ನಿಯಮಗಳ ಪ್ರಕಾರ ಮಕ್ಕಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಖಾತೆಗಳನ್ನು ರಚಿಸಲು ಪೋಷಕರ ಪರಿಶೀಲಿಸಬಹುದಾದ ಒಪ್ಪಿಗೆಯನ್ನು ಕಡ್ಡಾಯಗೊಳಿಸುವುದನ್ನು ಸರಕಾರವು ಪ್ರಸ್ತಾವಿಸಿದೆ.
ಸಾರ್ವಜನಿಕ ಸಮಾಲೋಚನೆಗಾಗಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪ್ರಕಟಿಸಿರುವ ಕರಡು ನಿಯಮಗಳಲ್ಲಿ ಹೆತ್ತವರು ಅಥವಾ ಕಾನೂನುಬದ್ಧ ಪಾಲಕರು ನೀಡಿದ ಒಪ್ಪಿಗೆಯನ್ನು ಸರಕಾರದಿಂದ ಅನುಮೋದಿತ ಗುರುತಿನ ಪುರಾವೆಯ ಮೂಲಕ ಸ್ವಯಂಪ್ರೇರಿತವಾಗಿ ದೃಢೀಕರಿಸಬೇಕು ಎಂದು ಹೇಳಲಾಗಿದೆ.
ನಿಯಮವು ಸಾಮಾಜಿಕ ಮಾಧ್ಯಮ ವೇದಿಕೆಗಳೊಂದಿಗೆ ಇ- ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಗೇಮಿಂಗ್ ಪ್ಲಾಟ್ ಫಾರ್ಮ್‌ಗಳಿಗೂ ಅನ್ವಯಿಸುತ್ತದೆ.
ಪ್ಲಾಟ್‌ಫಾರ್ಮ್‌ಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ವಿಕಲಾಂಗ ವ್ಯಕ್ತಿಗಳ ವೈಯಕ್ತಿಕ ಡೇಟಾವನ್ನು ಬಳಸಲು ಅಥವಾ ಸಂಗ್ರಹಿಸಲು ಪ್ರಾರಂಭಿಸುವ ಮುನ್ನ ಪೋಷಕರ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಕರಡು ನಿಯಮಗಳಲ್ಲಿ ಹೇಳಲಾಗಿದೆ. ಆದಾಗ್ಯೂ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಸಂಸ್ಥೆಗಳು ಕೆಲವು ನಿರ್ಬಂಧಗಳೊಂದಿಗೆ ಮಕ್ಕಳ ವೈಯಕ್ತಿಕ ಡೇಟಾವನ್ನು ಸಂಸ್ಕರಿಸಲು ಅನುಮತಿ ನೀಡಲಾಗುವುದು.
ಪ್ರಸ್ತಾವಿತ ನಿಯಮಗಳು 2023ರ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯ್ದೆಯ ನಿಬಂಧನೆಗಳನ್ನು ಜಾರಿಗೊಳಿಸಲು ಪ್ರಮುಖವಾಗಿವೆ. ಕಾಯ್ದೆಯು ಆಗಸ್ಟ್ 2023ರಲ್ಲಿಯೇ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಿದ್ದರೂ ಅದರ ಜಾರಿಗಾಗಿ ನಿಯಮಗಳನ್ನು ರೂಪಿಸಲಾಗುತ್ತಿದೆ.
2023ರ ಡೇಟಾ ಸಂರಕ್ಷಣೆ ಕಾಯ್ದೆಯು ವೈಯಕ್ತಿಕ ಗೋಪ್ಯತೆಯನ್ನು ಬಲಪಡಿಸುವುದಿಲ್ಲ ಮತ್ತು ವ್ಯಕ್ತಿಗಳ ಡೇಟಾಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸರಕಾರೇತರ ಸಂಸ್ಥೆಗಳ ಮೇಲೆ ಸಾಕಷ್ಟು ಹೊಣೆಗಾರಿಕೆಯನ್ನು ಹೊರಿಸುವುದಿಲ್ಲ ಎಂಬ ಕಳವಳವನ್ನು ವಿಮರ್ಶಕರು ವ್ಯಕ್ತಪಡಿಸಿದ್ದಾರೆ.
0 Comments