ಇಲ್ಲಿಯ ಪ್ರಮುಖ ಸಿಖ್ ಅಧ್ಯಯನ ಸಂಸ್ಥೆ ಭಾಯಿ ವೀರ ಸಿಂಗ್ ಸಾಹಿತ್ಯ ಸದನವು ದಿವಂಗತ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮರಣಾರ್ಥ ವಿದ್ಯಾರ್ಥಿ ವೇತನ ಮತ್ತು ಸ್ಮಾರಕ ಉಪನ್ಯಾಸವನ್ನು ಆರಂಭಿಸುವುದಾಗಿ ರವಿವಾರ ಪ್ರಕಟಿಸಿದೆ.
ಶನಿವಾರ ಇಲ್ಲಿ ಸಭೆ ಸೇರಿದ ಸದನದ ಸಾಮಾನ್ಯ ಮಂಡಳಿಯು ದಿಲ್ಲಿ ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಡಾ.ಮನಮೋಹನ ಸಿಂಗ್ ಸ್ಮಾರಕ ಸ್ವರ್ಣ ಪದಕವನ್ನು ನೀಡಲು ನಿರ್ಧರಿಸಿದೆ ಮತ್ತು ಈ ಉದ್ದೇಶಕ್ಕಾಗಿ ದತ್ತಿ ನಿಧಿಯನ್ನು ಅನುಮೋದಿಸಿದೆ.
ಪ್ರತಿ ವರ್ಷ ದಿವಂಗತ ಪ್ರಧಾನಿಯ ಜನ್ಮದಿನದಂದು (ಸೆ.26) ಡಾ.ಮನಮೋಹನ ಸಿಂಗ್ ಸ್ಮಾರಕ ಉಪನ್ಯಾಸವನ್ನು ನೀಡಲು ಅಂತರರಾಷ್ಟ್ರೀಯ ಖ್ಯಾತಿಯ ಪ್ರತಿಷ್ಠಿತ ವಿದ್ವಾಂಸರನ್ನು ಆಹ್ವಾನಿಸಲೂ ಸದನವು ನಿರ್ಧರಿಸಿದೆ.
ಈ ನಡುವೆ ಖ್ಯಾತ ಕೃಷಿ ಅರ್ಥಶಾಸ್ತ್ರಜ್ಞ ಎಸ್.ಎಸ್.ಜೋಹಲ್ ಸದನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಜೋಹಲ್ ಅವರು ಮನಮೋಹನ ಸಿಂಗ್ ಅಧ್ಯಕ್ಷರಾಗಿದ್ದಾಗ ಸದನದ ಹಿರಿಯ ಉಪಾಧ್ಯಕ್ಷರಾಗಿದ್ದರು.
ಸಾಮಾಜಿಕ ಜವಾಬ್ದಾರಿಯೊಂದಿಗೆ ಬೆಳವಣಿಗೆಗೆ ಒತ್ತು ನೀಡಿದ್ದ ತನ್ನ ಆರ್ಥಿಕ ಸುಧಾರಣೆಗಳ ಮೂಲಕ ದೇಶಕ್ಕೆ ಗೌರವವನ್ನು ತಂದಿದ್ದ ವಿಶ್ವಪ್ರಜೆ ಮನಮೋಹನ ಸಿಂಗ್ ಅವರ ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲು ಉಪಸಮಿತಿಯನ್ನು ರಚಿಸಲಾಗಿದೆ ಎಂದು ಸದನವು ತಿಳಿಸಿದೆ.
0 Comments