Ticker

6/recent/ticker-posts

ಮನೆಗೊಂದು ಗ್ರಂಥಾಲಯ ಯೋಜನೆಗೆ ಸಿಎಂ ಚಾಲನೆ, ಇದು ಹೇಗೆ ಕಾರ್ಯನಿರ್ವಹಿಸಲಿದೆ?

 


ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ "ಮನೆಗೊಂದು ಗ್ರಂಥಾಲಯ" ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಾಧಿಕಾರ ಪ್ರಕಟಿಸಿರುವ ಕುಮಾರವ್ಯಾಸ ಭಾರತ ಸಂಪುಟಗಳನ್ನು ಸಹ ಅವರು ಲೋಕಾರ್ಪಣೆಗೊಳಿಸಿದರು. ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿಯೇ ಮನೆಗೊಂದು ಗ್ರಂಥಾಲಯ ಯೋಜನೆಯ ಮೊದಲ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ.

ಕೃಷ್ಣಾದಲ್ಲಿರುವ ಗ್ರಂಥಾಲಯಕ್ಕೆ ಹಿರಿಯ ಸಾಹಿತಿ ನಾಡೋಜ ಡಾ.ಹಂಪ ನಾಗರಾಜಯ್ಯ ಅವರು ಚಾಲನೆ ನೀಡಿದರು. ಇದೇ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಗ್ರಂಥಾಲಯದ ಫಲಕವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆಯಡಿ ರಾಜ್ಯದಾದ್ಯಂತ ಪ್ರಸಕ್ತ ಸಮಿತಿಯ ಅವಧಿಯಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.


ಪುಸ್ತಕಾಭಿರುಚಿಯನ್ನು ಇಂದಿನ ಯುವಪೀಳಿಗೆಯಲ್ಲಿ ಬೆಳೆಸುವುದು ಇದರ ಮುಖ್ಯ ಉದ್ದೇಶ. ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯ ಕಟ್ಟುವುದು ಈ ಯೋಜನೆಯ ಕನಸಾಗಿದೆ ಎಂದು ಹೇಳಿದರು. ಇನ್ನು ಈ "ಮನೆಗೊಂದು ಗ್ರಂಥಾಲಯ" ಯೋಜನೆಯ ಪ್ರಮುಖ ಅಂಶಗಳು ಹೀಗಿವೆ.. ಮನೆಗೊಂದು ಗ್ರಂಥಾಲಯ ಯೋಜನೆಯಡಿ ಮನೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಅಥವಾ ಕಚೇರಿಗಳಲ್ಲಿ ಗ್ರಂಥಾಲಯವನ್ನು ಸ್ಥಾಪನೆ ಮಾಡುವುದು ಮುಖ್ಯ ಉದ್ದೇಶ. ಮನೆಯ ಮಾಲೀಕರು 100 ಪುಸ್ತಕಗಳಿಂದ ಆರಂಭಿಸಿ ಗ್ರಂಥಾಲಯವನ್ನು ಸ್ಥಾಪನೆ ಮಾಡಬೇಕು. ಪುಸ್ತಕಗಳ ಖರೀದಿ ಹಾಗೂ ಅವುಗಳನ್ನು ಸುಸಜ್ಜಿತವಾಗಿ ಇಡುವ ಜವಾಬ್ದಾರಿ ಮನೆಯ ಮಾಲೀಕರದ್ದು ಎಂದು ವಿವರಿಸಿದರು.

ಈ ಗ್ರಂಥಾಲಯವನ್ನು ಗಣ್ಯರಿಂದ, ವಿದ್ವಾಂಸರುಗಳಿಂದ, ಕಲಾವಿದರುಗಳಿಂದ ಉದ್ಘಾಟನೆಯನ್ನು ಮಾಡಿಸುವ ಜವಾಬ್ದಾರಿ ಕನ್ನಡ ಪುಸ್ತಕ ಪ್ರಾಧಿಕಾರದದ್ದು. ಪ್ರಚಾರದ ಜವಾಬ್ದಾರಿಯನ್ನು ಪ್ರಾಧಿಕಾರವೇ ವಹಿಸಲಿದ್ದು, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯ ಜಾಗೃತ ಸಮಿತಿ ರಚನೆಯನ್ನು ಮಾಡಲಾಗುತ್ತದೆ. ಗ್ರಂಥಾಲಯ ಸ್ಥಾಪಿಸಲು ಪ್ರೋತ್ಸಾಹ ನೀಡುವುದು, ಅದರ ಜೊತೆ ನಿಕಟ ಸಂಪರ್ಕ ಇಟ್ಟುಕೊಳ್ಳುವುದು ಸಮಿತಿಯ ಜವಾಬ್ದಾರಿ ಎಂದು ಹೇಳಿದರು.

ಕುಮಾರವ್ಯಾಸ ಭಾರತ ಕೃತಿಯ ಸಂಪುಟಗಳನ್ನು ಲೋಕಾರ್ಪಣೆಗೊಳಿಸಿದ ಸಿದ್ದರಾಮಯ್ಯ ಅವರು, ಆಡು ಭಾಷೆಯಲ್ಲಿ ಮಹಾಕಾವ್ಯ ಕಟ್ಟಿಕೊಟ್ಟ ಹಿರಿಮೆ ಗದುಗಿನ ನಾರಾಣಪ್ಪ ಅವರದ್ದು. ಕುಮಾರವ್ಯಾಸ ಎಂದೇ ಪ್ರಖ್ಯಾತರಾದ ಗದುಗಿನ ನಾರಾಣಪ್ಪ ರಚಿಸಿದ ʼಕರ್ಣಾಟ ಭಾರತ ಕಥಾಮಂಜರಿ' ಕುಮಾರವ್ಯಾಸ ಭಾರತ ಎಂದೇ ಪ್ರಖ್ಯಾತವಾಗಿದೆ ಎಂದು ಕೊಂಡಾಡಿದರು.

Post a Comment

0 Comments