ಯುವನಿಧಿ ಯೋಜನೆ'ಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಅಭ್ಯರ್ಥಿಗಳು ನೋಂದಾಯಿಸುವಂತಾಗಲು ಜ.6 ರಿಂದ 20ರ ವರೆಗೆ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ರಾಜ್ಯಾದಾದ್ಯಂತ ಎಲ್ಲ ರಾಜ್ಯ ಅಂಗೀಕೃತ ವಿಶ್ವ ವಿದ್ಯಾನಿಲಯಗಳ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಹಮ್ಮಿಕೊಳ್ಳಲಾಗಿದೆ.
2023 ಹಾಗೂ 2024ನೆ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ತೇರ್ಗಡೆಯಾದ ಅಭ್ಯರ್ಥಿಗಳು ಈ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬಹುದು. ಕರ್ನಾಟಕ ಸರಕಾರದ ಐದು ಖಾತರಿ ಯೋಜನೆಗಳಲ್ಲಿ ಒಂದಾದ 'ಯುವನಿಧಿ ಯೋಜನೆ'ಯು ರಾಜ್ಯದ 2023-24 ಹಾಗೂ 2024-25ನೆ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ತೇರ್ಗಡೆಯಾದ ಅರ್ಹ ನಿರುದ್ಯೋಗಿ ಯುವಕ, ಯುವತಿಯರಿಗೆ ನಿರುದ್ಯೋಗ ಭತ್ಯೆಯನ್ನು ಸಬಲೀಕರಣಗೊಳಿಸಲು ಜಾರಿಗೊಳಿಸಿರುವ ಸರಕಾರದ ಮಹತ್ತರ ಯೋಜನೆಯಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ಹಾಗೂ ಡಿಪ್ಲೋಮ ಪದವೀಧಾರರಿಗೆ 1,500 ರೂ. ನಿರುದ್ಯೋಗಿ ಭತ್ಯೆಯನ್ನು ನೀಡಲಾಗುತ್ತದೆ. ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸಗಳು ಪೂರೈಸಿ ಹೆಸರನ್ನು ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ನಂತರ ಮಾಹೆವಾರು ಯುವನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದ್ದಲ್ಲಿ, ಸೇವಾ ಸಿಂಧುವಿನಲ್ಲಿ ಪ್ರತಿ ತಿಂಗಳು ತಾವು ನಿರುದ್ಯೋಗಿಯೆಂದು, ಉನ್ನತ ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗವಿಲ್ಲವೆಂದು ಪ್ರತಿ ತಿಂಗಳು 25ನೇ ತಾರೀಖಿನೊಳಗಾಗಿ ಸ್ವಯಂ ಘೋಷಣೆ ಆಧಾರದ ಮೇಲೆ ಅಭ್ಯರ್ಥಿಗಳು ಮುಂದಿನ ಪಾವತಿಯನ್ನು ಸ್ವೀಕರಿಸಬಹುದಾಗಿದೆ.
ಅರ್ಹ ಅಭ್ಯರ್ಥಿಗಳು ಕರ್ನಾಟಕ ಒನ್/ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ ಸೀಡೆಡ್ ಬ್ಯಾಂಕ್ ಖಾತೆ ಹಾಗೂ ಆಧಾರ ಲಿಂಕ್ಡ್ ಮೊಬೈಲ್ ನಂಬರ್‍ನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಿದ ನಂತರ ಸೇವಾ ಸಿಂಧುವಿನಲ್ಲಿ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿಕೊಂಡು, ಒಂದು ವೇಳೆ ಅರ್ಜಿಯು ಅಪ್ರೂವಾಗದ ಸಂದರ್ಭದಲ್ಲಿ ಸೂಚಿಸಲ್ಪಟ್ಟ ಇಲಾಖೆಯ ಕಚೇರಿಗಳಿಗೆ ತಮ್ಮ ಎಲ್ಲಾ ಮೂಲ ಅಂಕಪಟ್ಟಿ ಹಾಗೂ ಇತರೆ ಪ್ರಮಾಣಪತ್ರಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಅಪ್ರೂವ್ ಮಾಡಿಸಿಕೊಳ್ಳಬೇಕಾಗಿದೆ.
0 Comments