Ticker

6/recent/ticker-posts

RTE ನಿಯಮಾವಳಿಗೆ ತಿದ್ದುಪಡಿ ಮಾಡಿದ ಕೇಂದ್ರ: ಸಂಪೂರ್ಣ ಮಾಹಿತಿ..

  


ಕೇಂದ್ರ ಸರ್ಕಾರವು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ನೀಡುವ 'RTE ಕಾಯ್ದೆ-2010ಕ್ಕೆ ತಿದ್ದುಪಡಿ ಮಾಡಿದೆ. ನೂತನ ನಿಯಮಾವಳಿಗಳ ಪ್ರಕಾರ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಹುದಾಗಿದೆ.

ಪರಿಷ್ಕೃತ ನಿಯಮಗಳ ಅಡಿಯಲ್ಲಿ ರಾಜ್ಯ ಸರ್ಕಾರಗಳು 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಅಧಿಕಾರವನ್ನು ಹೊಂದಿವೆ. ವಿದ್ಯಾರ್ಥಿಯು ಈ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದರೆ ಅವರಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿ ಮರು ಪರೀಕ್ಷೆಯಲ್ಲೂ ತೇರ್ಗಡೆಗೆ ವಿಫಲವಾದರೆ ಆತನನ್ನು ಅನುತ್ತೀರ್ಣಗೊಳಿಸಿ ಅದೇ ತರಗತಿಯಲ್ಲಿ ಮುಂದುವರಿಸಬಹುದಾಗಿದೆ.

ಈ ಕ್ರಮವು ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಗುಜರಾತ್, ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್, ಕರ್ನಾಟಕ ಮತ್ತು ದಿಲ್ಲಿ ಸೇರಿದಂತೆ ಕೆಲವು ರಾಜ್ಯಗಳು ಈ ನಿಯಮ ಜಾರಿಗೆ ಈಗಾಗಲೇ ನಿರ್ಧರಿಸಿವೆ. ಆದರೆ ಕೆಲ ರಾಜ್ಯಗಳು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದೆ. ಕೇರಳವು 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳನ್ನು ನಡೆಸುವುದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ, ಇದು ಮಕ್ಕಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ವಾದಿಸಿದೆ.

2009ರಲ್ಲಿ ಪರಿಚಯಿಸಲಾದ RTE ಕಾಯ್ದೆಯ ಮೂಲ ಆವೃತ್ತಿಯು "ನೋ-ಡೆಟೆನ್ನನ್" ನೀತಿಯನ್ನು ಒಳಗೊಂಡಿತ್ತು. ಈ ನಿಯಮಾವಳಿಗಳ ಪ್ರಕಾರ ಪರೀಕ್ಷೆಯಲ್ಲಿ ವಿಫಲವಾದರೆ ಅದೇ ತರಗತಿಯಲ್ಲಿ ಮಕ್ಕಳನ್ನು ಮುಂದುವರಿಸುವುದಕ್ಕೆ ನಿರ್ಬಂಧಿಸುತ್ತದೆ. ಹಿಂದುಳಿದ ಸಮುದಾಯದಿಂದ ಬಂದ ಮಕ್ಕಳು ಅನುತ್ತೀರ್ಣದ ಕಾರಣಕ್ಕೆ ಶಿಕ್ಷಣವನ್ನು ಮೊಟಕುಗೊಳಿಸದಂತೆ ನೋಡಿಕೊಳ್ಳುವುದು ಈ ನೀತಿಯ ಗುರಿಯಾಗಿತ್ತು. ಈ ನೀತಿಯು 2019ರವರೆಗೂ ಜಾರಿಯಲ್ಲಿತ್ತು ಮತ್ತು ಬಳಿಕ ಸಂಸತ್ತು ತಿದ್ದುಪಡಿ ಮಾಡಿದೆ.

ಈ ಕುರಿತು ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ಸಂಜಯ್‌ ಕುಮಾರ್ ಖಚಿತಪಡಿಸಿದ್ದು, 5 ಮತ್ತು 8ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಅದೇ ತರಗತಿಯಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ.

Post a Comment

0 Comments