ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫಂಗಲ್' ಚಂಡಮಾರುತದ ತ ಪರಿಣಾಮ ಮುಂದಿನ ಮೂರು-ನಾಲ್ಕು ದಿನ ರಾಜ್ಯದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಶನಿವಾರ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಕೆಲವೆಡೆ ಜಿಟಿಜಿಟಿ ಮಳೆಯಾಗಿದೆ. ಕೊಡಗಿನಲ್ಲಿ ಡಿ.3ರಿಂದ ಮುಂದಿನ 2 ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಚಾಮರಾಜನಗರ, ಮಂಡ್ಯ, ಮೈಸೂರಿನಲ್ಲಿ ಡಿ.2ರಿಂದ ಡಿ.4ರವರೆಗೆ ಹಾಗೂ ರಾಮನಗರದಲ್ಲಿ ಡಿ.3ರಂದು ಬಿರುಸಾಗಿ ವರ್ಷಧಾರೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಇರಲಿದೆ.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ, ಬಳ್ಳಾರಿ, ವಿಜಯನಗರದಲ್ಲಿ ಡಿ.2ರಿಂದ ಮುಂದಿನ 3 ದಿನ ಗುಡುಗು ಸಹಿತ ಮಳೆಯಾಗಲಿದೆ. ಕರಾವಳಿ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಇರಲಿದೆ.
ರಾಜ್ಯದಲ್ಲಿ ಥಂಡಿ ವಾತಾವರ
ಸೈಕ್ಲೋನ್ ಪರಿಣಾಮ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ, ಕನಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕುಸಿತವಾಗಿದೆ. ಇದರಿಂದಾಗಿ ಹಲವೆಡೆ ಥಂಡಿ ವಾತಾವರಣ ಉಂಟಾಗಿದ್ದು, ಜನರಿಗೆ ಚಳಿ ಅನುಭವವಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಶನಿವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಜತೆಗೆ ತಣ್ಣನೆ ಗಾಳಿ ಬೀಸುತ್ತಿದೆ. ರಾತ್ರಿ ಮತ್ತು ಮುಂಜಾನೆ ಇಬ್ಬನಿ ಹೆಚ್ಚಾಗಿ ಬೀಳುತ್ತಿದೆ. ಬೆಳಗಾವಿ, ಗದಗ, ಧಾರವಾಡ, ವಿಜಯಪುರದಲ್ಲಿ ತಾಪಮಾನ ಕುಸಿತವಾಗಿದೆ.
0 Comments