ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇ-ಶ್ರಮ ಯೋಜನೆ ಜಾರಿಗೆ ತರಲಾಗಿದೆ. ಇ-ಶ್ರಮ ಕಾರ್ಡ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರಗಳ ಕಲ್ಯಾಣ ಯೋಜನೆಗಳನ್ನು ತಲುಪಿಸಿ, ಸಾಮಾಜಿಕ ಭದ್ರತೆ ಕಲ್ಪಿಸಲಾಗುತ್ತಿದೆ. ರಾಜ್ಯದಲ್ಲೂ ಇ-ಶ್ರಮ ಕಾರ್ಡ್ ನೀಡಲಾಗುತ್ತಿದ್ದು, ಯೋಜನೆಯ ವಸ್ತುಸ್ಥಿತಿಯ ಕುರಿತು ಸಮಗ್ರ ವರದಿ ಇಲ್ಲಿದೆ.ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಅರ್ಜಿ ಹಾಕಲು ಇ-ಶ್ರಮ ಕಾರ್ಡ್ ಮುಕಾಂತರ ಅವಕಾಶ ಕಲ್ಪಿಸಲಾಗಿತ್ತು.
ಇ-ಶ್ರಮ ಕಾರ್ಡ್ ಎಂಬುದು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟೀಯ ದತ್ತಾಂಶವಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆ ಅಸಂಘಟಿತ ವಲಯದ ಕಾರ್ಮಿಕರ ಶ್ರೇಯೋಭಿವೃದ್ಧಿ ಮೂಲ ಉದ್ದೇಶ ಹೊಂದಿದೆ. ಇ-ಶ್ರಮ್ ಕಾರ್ಡ್ ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಪ್ರಯೋಜನಗಳನ್ನು ಒದಗಿಸಲು ಭಾರತ ಸರ್ಕಾರ ಪ್ರಾರಂಭಿಸಿದ ಡಿಜಿಟಲ್ ವೇದಿಕೆಯಾಗಿದೆ.
ಇದು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ವಿಶಿಷ್ಟ 12-ಅಂಕಿಯ ಗುರುತಿನ ಸಂಖ್ಯೆಯಾಗಿದೆ. ಇ-ಶ್ರಮ ಕಾರ್ಡ್ ಹೆಸರು, ವಯಸ್ಸು, ಲಿಂಗ, ಉದ್ಯೋಗ ಮತ್ತು ಕೆಲಸಗಾರನ ಕುರಿತು ಇತರ ಸಂಬಂಧಿತ ಮಾಹಿತಿಯಂತಹ ವಿವರಗಳನ್ನು ಒಳಗೊಂಡಿದೆ. ಇ-ಶ್ರಮ ಕಾರ್ಡ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದ್ದು ಅದು ಭಾರತದಲ್ಲಿನ ಅಸಂಘಟಿತ ಕಾರ್ಮಿಕರ ಸಮಗ್ರ ಡೇಟಾಬೇಸನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಆಧಾರ್ ಸಂಖ್ಯೆಗೆ ಜೋಡಣೆಯಾದ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶವನ್ನು ಸಿದ್ದಪಡಿಸಲು, ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯ ಇ-ಶ್ರಮ ಪೋರ್ಟಲ್ ಅನ್ನು (www.eshram.gov.in) ಅಭಿವೃದ್ಧಿಪಡಿಸಿದೆ. ಇದು ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಮಿಕರ ಹೆಸರು, ವೃತ್ತಿ, ವಿಳಾಸ, ವಿದ್ಯಾರ್ಹತೆ, ಕೌಶಲ್ಯದ ವಿಧ, ಕುಟುಂಬದ ವಿವರ, ಬ್ಯಾಂಕ್ ಖಾತೆ ವಿವರ ಇತ್ಯಾದಿ ವಿವರ ಒಳಗೊಂಡಿರುತ್ತದೆ.
ಪ್ರಸ್ತುತ ಅಸಂಘಟಿತ ಕಾರ್ಮಿಕರ ಕೇಂದ್ರಕೃತ ದತ್ತಾಂಶ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ, ವಲಸೆ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೋಪಾಯ ಕಲ್ಪಿಸುವುದು ಕಷ್ಟ ಸಾಧ್ಯವಾಗಿದೆ. ಅಸಂಘಟಿತ ಹಾಗೂ ವಲಸೆ ಕಾರ್ಮಿಕರ ಸಮಗ್ರ ದತ್ತಾಂಶ ಅವರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿಸ್ತರಿಸಲು ಸಹಾಯಕವಾಗಿದೆ.
ಇ-ಶ್ರಮ ಪೋರ್ಟಲ್‌ನಲ್ಲಿ ಕಾರ್ಮಿಕ ವರ್ಗಗಳಲ್ಲಿ ಅತ್ಯಂತ ದುರ್ಬಲ ವರ್ಗದವರಾದ ವಲಸೆ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಸಮಗ್ರ ದತ್ತಾಂಶವನ್ನು ಸಿದ್ದಪಡಿಸಲಾಗುತ್ತಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್‍ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರ ಗುರುತಿಸಿರುವ ಸುಮಾರು 379 ವರ್ಗಗಳ ಕಾರ್ಮಿಕರು ಹಾಗೂ ಪಟ್ಟಿಯಲ್ಲಿ ಸೇರಿರದ ಅಸಂಘಟಿತ ಕಾರ್ಮಿಕರು “ಇತರೆ ವರ್ಗಗಳಡಿ ನೋಂದಣಿಯಾಗಬಹುದು.
ಇ-ಶ್ರಮ ಕಾರ್ಡ್‌ನ ಪ್ರಯೋಜನಗಳೇನು?
ಈ ಮೂಲಕ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಲ್ಪಿಸಲಾಗುತ್ತದೆ. ಇ-ಶ್ರಮ ಕಾರ್ಡ್‌ನೊಂದಿಗೆ, ಅಸಂಘಟಿತ ವಲಯದ ಕಾರ್ಮಿಕರು ಆರೋಗ್ಯ ಮತ್ತು ಜೀವ ವಿಮೆ, ವೃದ್ಧಾಪ್ಯ ಪಿಂಚಣಿ, ಅಂಗವೈಕಲ್ಯ ಪಿಂಚಣಿ, ಮಾತೃತ್ವ ಪ್ರಯೋಜನ ಮುಂತಾದ ಸರ್ಕಾರದಿಂದ ಪ್ರಾರಂಭಿಸಲಾದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡಲಾಗುತ್ತದೆ. ಇ-ಶ್ರಮ ಕಾರ್ಡ್ ಪೋರ್ಟಬಲ್ ಆಗಿದೆ. ಅಂದರೆ ಕಾರ್ಮಿಕರು ದೇಶಾದ್ಯಂತ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಪಡೆಯಬಹುದು. ಇ-ಶ್ರಮ ಕಾರ್ಡ್ ಅಸಂಘಟಿತ ಕಾರ್ಮಿಕರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ವಿವಿಧ ಹಣಕಾಸು ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುವ ಮೂಲಕ ಆರ್ಥಿಕ ಸೇರ್ಪಡೆಗೆ ಅನುಕೂಲ ಮಾಡಿ ಕೊಡಲಾಗುತ್ತದೆ.
ರಾಜ್ಯದಲ್ಲಾಗಿರುವ ನೋಂದಣಿ ಎಷ್ಟು?
ಇಲಾಖೆ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈವರೆಗೆ ಒಟ್ಟು 77,46,235 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಅತಿ ಹೆಚ್ಚು ರಾಜ್ಯದ ಕೃಷಿ ವಲಯದಲ್ಲಿನ 42,28,518 ವಿವಿಧ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಬಳಿಕ 9,03,398 ಕಟ್ಟಡ ನಿರ್ಮಾಣ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಜವಳಿ ವಲಯದ ಅಸಂಘಟಿತ ಕಾರ್ಮಿಕರು 7,15,291 ಇ-ಕಾರ್ಡ್ ಪಡೆದುಕೊಂಡಿದ್ದಾರೆ. ಅಟೋಮೊಬೈಲ್ ಮತ್ತು ಸಾರಿಗೆ ವಲಯದ 3,51,584 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ.
3,35,600 ಇತರೆ ವಲಯದ ಅಸಂಘಟಿತ ಕಾರ್ಮಿಕರು ಇ-ಕಾರ್ಡ್ ಗೆ ನೋಂದಣಿ ಮಾಡಿಕೊಂಡಿದ್ದರೆ, 2,00,673 ಮನೆ ಗೆಲಸದ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಚರ್ಮೋದ್ಯಮದ ವಲಯದಲ್ಲಿನ 1,34,551 ಕಾರ್ಮಿಕರು, ಉತ್ಪಾದನಾ ವಲಯದಲ್ಲಿನ 1,13,018 ಕಾರ್ಮಿಕರು, ಆರೋಗ್ಯ ಕ್ಷೇತ್ರದಲ್ಲಿನ 1,05,648 ಕಾರ್ಮಿಕರು ಇ-ಕಾರ್ಡ್ ಗೆ ನೋಂದಾಯಿಸಿಕೊಂಡಿದ್ದಾರೆ. ಟೊಬ್ಯಾಕೊ ಕೈಗಾರಿಕೆ ವಲಯದಲ್ಲಿನ 99,209 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ನಾಮಿನಿ ಆಧಾರ್ ಕಾರ್ಡ್
0 Comments